ರಂಗಸಮುದ್ರ ದೇಸೀಕಲೆಗೆ ಸ್ಪೂರ್ತಿದಾಯಕ ----ರೇಟಿಂಗ್ : 3/5 ***
Posted date: 20 Sat, Jan 2024 10:13:05 AM
ಇತ್ತೀಚೆಗೆ ನಶಿಸಿ ಹೋಗುತ್ತಿರುವ ಜಾನಪದ ಕಲೆ ಡೊಳ್ಳುವಿದ್ಯೆ. ಇದನ್ನು ತಾತ, ಮೊಮ್ಮಗನ  ಬಾಂಧವ್ಯದ ಕಥೆಯ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನವೇ ರಂಗಸಮುದ್ರ. ಈ ಮೂಲಕ ನಿರ್ದೇಶಕ ರಾಜಕುಮಾರ್ ಅಸ್ಕಿ ಅವರು ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ಗಡಿ ಭಾಗದ ರಂಗಸಮುದ್ರ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ತಾತ ಮೊಮ್ಮಗನ  ಸುತ್ತ ನಡೆಯೋ ಕಥೆ ಈ ಚಿತ್ರದಲ್ಲಿದೆ.  ಬಾಂಧವ್ಯದ ಕಥೆಯ  ಜೊತೆಗೆ  ಮಕ್ಕಳಿಗೆ   ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಸೂಕ್ಷ್ಮವಾಗಿ ಹೇಳಲು ಪ್ರಯತ್ನಿಸಿದ್ದಾರೆ.  ಶ್ರೀಮಂತಿಕೆ ಹಾಗೂ ಬಡತನದ ನಡುವೆ ಇರುವ ಅಂತರ, ಜಾನಪದ ಕಲೆಗಿರುವ ಮಹತ್ವ, ಹಳ್ಳಿಯ ತುಂಟ ಹುಡುಗರ ತುಂಟಾಟ, ಅವರ ಮುಗ್ದಮನಸಿನಲ್ಲಿ  ಹುಟ್ಟುವ ಯೋಚನಾಲಹರಿ ಇದರಜೊತೆ  ಗಮನ ಸೆಳೆಯುವ ಸಂದೇಶವನ್ನು  ಚಿತ್ರದಲ್ಲಿ  ಹೇಳಲಾಗಿದೆ. 
  ರಂಗಸಮುದ್ರದ  ಹಿರಿಯಜೀವ ಚೆನ್ನಪ್ಪ (ರಂಗಾಯಣ ರಘು). ಒಂದಷ್ಟು ಹುಡುಗರನ್ನು   ಸೇರಿಸಿಕೊಂಡು ಅವರಿಗೆ ಡೊಳ್ಳು ಕುಣಿತದ ದೇಸೀ ಕಲೆಯ  ಹಿರಿಮೆಯನ್ನು ಹೇಳುವುದೇ ಅವನ ಕಾಯಕ. ಚೆನ್ನಪ್ಪನ ಡೊಳ್ಳು ಕುಣಿತಕ್ಕೆ  ಊರಿಗೆ ಊರೇ ಕುಣಿದು ಕುಪ್ಪಳಿಸುತ್ತದೆ, ತಾನಾಯಿತು, ತನ್ನ ಮುದ್ದಾದ ಮೊಮ್ಮಗ ಮಹಾಲಿಂಗ ಯಾನೆ ಗೂಬೇ(ಸ್ಕಂದ). ಬಡತನದಲ್ಲಿದ್ದರೂ ಯಾವ ದರ್ಪ, ದಬ್ಬಾಳಿಗೂ ಬಗ್ಗದ ಸ್ವಾಭಿಮಾನಿ ಬದುಕು ಆತನದು. ಇನ್ನು ಈತನ ಮೊಮ್ಮಗ ಶಾಲೆಯಲ್ಲಿ ಸಖತ್ ತುಂಟ.  ತನ್ನ ಗೆಳೆಯರದೇ ಒಂದು ಬಳಗ. ಆ ಶಾಲೆಯಲ್ಲಿದ್ದ. ಮಂಗಳೂರಿನ ಮೇಷ್ಟ್ರೊಬ್ಬರು  ಉತ್ತರ ಕರ್ನಾಟಕದ ಮಕ್ಕಳಿಗೆ ಪಾಠ ಮಾಡುವಾಗ ಜರುಗುವ ಸನ್ನಿವೇಶಗಳು ಹಾಸ್ಯಮಯವಾಗಿವೆ, ಇದರ ನಡುವೆ ಅದೇ ಶಾಲೆಯ ವಾಣಿ(ದಿವ್ಯಗೌಡ) ಟೀಚರನ್ನು ಕಂಡರೆ ಆ ಮೇಷ್ಟ್ರಿಗೆ  ಲವ್. 
ಆ ಊರಿನ ಸಾಹುಕಾರ (ಸಂಪತ್‌ರಾಜ್)  ಕಷ್ಟದಲ್ಲಿರುವ ಬಡವರಿಗೆ ಹಣಕೊಟ್ಟು  ಅವರ ಮಕ್ಕಳು ಜನರನ್ನು  ತನ್ನಬಳಿ ಜೀತಕ್ಕಿಟ್ಟುಕೊಂಡಿರುತ್ತಾನೆ. ಹಗಲಿರುಳು ಎನ್ನದೆ ಅವರಿಂದ  ದುಡಿಸಿಕೊಳ್ಳುತ್ತಿರುತ್ತಾನೆ. ಆತನ ಶ್ರೀಮಂತಿಕೆ, ದಬ್ಬಾಳಿಕೆ, ಆತನ ಕಾರು, ಊರಿನ ಯಾರೊಬ್ಬರೂ ಸಹ ಆತನೆದುರು  ನಿಂತು ವಾದಿಸುವ ಧೈರ್ಯ ಮಾಡಲ್ಲ. ಆ ಶ್ರೀಮಂತನ  ಮಗಳು ನಂದಿನಿ ಕೂಡ ಎಲ್ಲಾ ಮಕ್ಕಳಂತೆ ಅದೇ ಶಾಲೆಯಲ್ಲಿ ಓದುತ್ತಿರುತ್ತಾಳೆ. 
 
ಕಾರು ಇರುವುದು ಶ್ರೀಮಂತರಿಗೆ ಮಾತ್ರ, ಅದಿದ್ದರೆ  ಊರಲ್ಲಿ  ಎಲ್ಲರೂ  ದೊಡ್ಡ ಗೌರವ ಕೊಡುತ್ತಾರೆ ಎಂಬ ಭಾವನೆ ಆ ಶಾಲೆಯ ಗೂಬೇ ಹಾಗೂ ಆತನ ಸ್ನೇಹಿತರ ಮನಸ್ಸಿನ ಮೇಲೆ ದೊಡ್ಡ  ಪರಿಣಾಮ ಬೀರುತ್ತದೆ. ಒಮ್ಮೆ ಊರಲ್ಲಿ  ಜಾತ್ರೆ ನಡೆಯುವಾಗ ಸಾಹುಕಾರನಿಂದ ಕಾರಿನ ವಿಷಯವಾಗೇ  ಚೆನ್ನಪ್ಪನಿಗೆ ಅವಮಾನವಾಗುತ್ತದೆ. ಇದನ್ನ ಕಂಡ ಮೊಮ್ಮಗ, ಅದೇ ಸಾಹುಕಾರನಿಗೆ  ತಾನೊಂದು ಕಾರು ತಗೊಂಡು ತನ್ನ ತಾತನನ್ನು  ಆ ಕಾರಿನಲ್ಲಿ ಕೂರಿಸಿಕೊಂಡು  ಊರೆಲ್ಲ ಸುತ್ತಿಸುತ್ತೇನೆ ಎಂದು ಛಾಲೆಂಜ್  ಮಾಡುತ್ತಾನೆ. ತನ್ನ ತಾತನಿಗಾಗಿ ಕಾರು ತರಲೆಂದು   ಗೆಳೆಯರೊಂದಿಗೆ ಊರನ್ನೇ ಬಿಟ್ಟು ಬರುತ್ತಾನೆ. ಇತ್ತ ಮೊಮ್ಮಗನನ್ನು ಕಾಣದೆ ಹಿರಿಜೀವ ಚೆನ್ನಪ್ಪ ಚಡಪಡಿಸುತ್ತಾ ಮೊಮ್ಮಗನನ್ನು  ಹುಡುಕಲಾರಂಭಿಸುತ್ತಾನೆ. ಕೊನೆಗೂ ಮೊಮ್ಮಗ ಕಾರನ್ನು ತಂದು ತನ್ನ ತಾತನನ್ನು ಕೂರಿಸಿಕೊಂಡು ಊರಲ್ಲಿ ಮೆರವಣಿಗೆ ಮಾಡಿಸುತ್ತಾನಾ, ಇಲ್ವಾ,  ಎನ್ನುವುದೇ  ರಂಗಸಮುದ್ರ ಚಿತ್ರದ ಕಥಾಹಂದರ. 
  ಚೆನ್ನಪ್ಪನ ಪಾತ್ರವನ್ನು   ನಟ ರಂಗಾಯಣ ರಘು ಅವರು ಜೀವಿಸಿದ್ದಾರೆ. ತನ್ನ ಭಾವಪೂರ್ಣ ಅಭಿನಯದ  ಮೂಲಕವೇ ಪಾತ್ರಕ್ಕೆ  ಜೀವ ತುಂಬಿದ್ದಾರೆ. ಮೊಮ್ಮಗನ ಪ್ರೀತಿಯ ತಾತನಾಗಿ ಅಭಿನಯಿಸುವುದರ ಜೊತೆಗೆ  ದೊಳ್ಳು ಕಲೆಯ ಸೊಗಡು, ಮಾತಿನ ಶೈಲಿ, ಭಾವನೆಯನ್ನು ಅಚ್ಚುಕಟ್ಟಾಗಿ ಮೂಡಿಸಿದ್ದಾರೆ.
 
ಇನ್ನು ಮೊಮ್ಮಗನ ಪಾತ್ರದಲ್ಲಿ  ಕಾಣಿಸಿಕೊಂಡಿರುವ  ಸ್ಕಂದ  ತನ್ನ ಮುಗ್ಧ, ತುಂಟತನದ ಅಭಿನಯದ ಮೂಲಕ  ಗಮನ ಸೆಳೆಯುತ್ತಾರೆ. ಭವಿಷ್ಯದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಗುರ್ತಿಸಿಕೊಂಡಿರುವ ಮತ್ತೊಬ್ಬ ಪ್ರತಿಭೆ ಮಹೇಂದ್ರ ಕೂಡ ತನ್ನ ನಟನಾ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾನೆ. ವಿಶೇಷ ರೋಲ್ ನಲ್ಲಿ ಕಾಣಿಸಿಕೊಂಡಿರುವ   ಹಿರಿಯನಟ ರಾಘವೇಂದ್ರ ರಾಜಕುಮಾರ್ ಅವರ ಪಾತ್ರವು ಇಡೀ ಕಥೆಗೆ  ಸ್ಪೂರ್ತಿದಾಯಕವಾಗಿದೆ. ಊರ ಸಾಹುಕಾರನಾಗಿ  ಸಂಪತ್ ಕುಮಾರ್, ಆತನ ಬಂಟನಾಗಿ ಉಗ್ರಂ ಮಂಜು ಗಮನ ಸೆಳೆಯುವ ಅಭಿನಯ ನೀಡಿದ್ದಾರೆ.  ಮೇಷ್ಟು ಪಾತ್ರದಲ್ಲಿ  ಕಾರ್ತಿಕ್‌ರಾವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದೇ ರೀತಿ ನಟಿ ದಿವ್ಯಗೌಡ ತಮಗೆ ಸಿಕ್ಕ ಅವಕಾಶದಲ್ಲಿ  ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ, ಮೋಹನ್ ಜುನೇಜ್, ಮೂಗು ಸುರೇಶ್, ಗುರುರಾಜ್ ಹೊಸಕೋಟೆ ಸೇರಿದಂತೆ ಎಲ್ಲ  ಪಾತ್ರದಾರಿಗಳು ಕಥೆಯ ಓಟಕ್ಕೆ ಸಾಥ್ ನೀಡಿದ್ದಾರೆ. 
 
ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಗ್ರಾಮೀಣ ಭಾಗದ ಕಲೆ, ಸಂಸ್ಕೃತಿಯ ಜೊತೆಗೆ ಶಿಕ್ಷಣವಿದ್ದರೆ ಏನನ್ನಾದರೂ ಸಾಸಬಹುದು ಎಂದು ತೋರಿಸಿದ್ದಾರೆ. ಇಂತಹ ಸೊಗಡಿನ ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕರಿಲ್ಲಿ ನಿಜಕ್ಕೂ  ಅಭಿನಂದನಾರ್ಹರು. ಛಾಯಾಗ್ರಹಕ ಆರ್.ಗಿರಿ ಅವರ ಕ್ಯಾಮೆರಾ ಕೈಚಳಕ ಉತ್ತಮವಾಗಿದ್ದು, ಅಷ್ಟೇ ಸೊಗಸಾಗಿ ದೇಸಿಮೋಹನ್ ಅವರ ಸಂಗೀತ ಮೂಡಿಬಂದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed